ತಾನೇ ತಂದ ಮಚ್ಚಿನಿಂದ..!!ಮಂಡ್ಯದಲ್ಲಿ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ...!!
ಮಂಡ್ಯ: ರೌಡಿಶೀಟರ್ ಒಬ್ಬನನ್ನು ಸ್ನೇಹಿತರೆ ಕತ್ತು ಕತ್ತರಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದವರನ್ನು ಸುಧೀರ್(35) ಎಂದು ಗುರುತಿಸಲಾಗಿದ್ದು, ಪಾರ್ಟಿ ಮಾಡುವ ವೇಳೆ ವಿಚಾರ ಒಂದಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.
ತಾನೇ ತಂದ ಮಚ್ಚಿನಿಂದ ಕೊಲೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಣ ತಾಲ್ಲೂಕಿನ ಹುಲಿಕೆರೆ ನಿವಾಸಿಯಾದ ಸುಧೀರ್ ತನ್ನ ಸ್ನೇಹಿತ ಪೂರ್ಣಚಂದ್ರ ಸೇರಿದಂತೆ ಇನ್ನಿತರ ಜೊತೆ ಗ್ರಾಮದ ಟೀ ಅಂಗಡಿ ಮುಂಭಾಗ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಈ ವೇಳೆ ವಿಚಾರ ಒಂದಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸುಧೀರ್ ತನ್ನ ಮನೆಗೆ ತೆರಳಿ ಮಚ್ಚನ್ನು ತಂದಿದ್ದಾನೆ.
ಈ ವೇಳೆ ಪೂರ್ಣಚಂದ್ರ ಹಾಗೂ ಇನ್ನಿತರರು ಸುಧೀರ್ ಬಳಿ ಇದ್ದ ಮಚ್ಚನನ್ನು ಕಿತ್ತುಕೊಂಡು ಸುಮ್ಮನಾಗುವಂತೆ ಹೇಳಿದ್ದರು. ಬಳಿಕ ಪಾರ್ಟಿಯಿಂದ ಎದ್ದು ಬಂದ ಸುಧೀರ್ನನ್ನು ಹಿಂಬಾಲಿಸಿ ಪೂರ್ಣಚಂದ್ರ ಹಾಗೂ ಸ್ನೇಹಿತರು ಆತನ ಕತ್ತನ್ನು ಕತ್ತರಿಸಿ ಪರಾರಿಯಾಗಿದ್ಧಾರೆ. ಗ್ರಾಮದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸತ್ತು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.
ಸ್ಥಳಕ್ಕೆ ಭೇಟಿ ನೀಡಿದ ಕೆಆರ್ಎಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುಧೀರ್ ಹಾಗೂ ಪೂರ್ಣಚಂದ್ರನ ನಡುವೆ ಹಳೇ ದ್ವೇಷವಿದ್ದ ಕಾರಣ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ತೂಕದಲ್ಲಿ ಮೋಸ ಮಾಡುತ್ತಿದ್ದ ಖರೀದಿದಾರನಿಗೆ, ರೈತರು ತರಾಟೆಗೆ ತೆಗೆದುಕೊಂಡರು.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ವಿಠಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡಿಜಿ ಕೊಪ್ಪಲು ಗ್ರಾಮದ ರೈತಹನುಮೇಗೌಡ ಅವರ ಮಗ ರಘು ಎಂಬುವವರ ಒಂದುವರೆ ಎಕ್ಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಮಾರಾಟ ಮಾಡುವ ಸಮಯದಲ್ಲಿ ಖರೀದಿ ಮಾಡುತ್ತಿದ್ದವರು ತೂಕದಲ್ಲಿ ಮೋಸ ಮಾಡುತ್ತಿದ್ದ, ಮೋಸಗಾರನನ್ನು ಗ್ರಾಮಸ್ಥರು ಕಂಡುಹಿಡಿದು ತರಾಟೆಗೆ ತೆಗೆದುಕೊಂಡು, ಇಂತಹ ಮೋಸಗಾರರನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತರಿಗೆ ಮೋಸ ಆಗದಂತೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ನಂತರ ಮಾತನಾಡಿದ ಗ್ರಾಮದ ಮುಖಂಡ ಮಂಜುನಾಥ್ ರೈತರು ಕಷ್ಟಪಟ್ಟು ಬೆಳೆದ ಬೆಲೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲ. ಬೆಳೆ ಬೆಳೆಯಲು ಮಾಡಿದ ಸಾಲವನ್ನು ತೀರಿಸಲು ಆಗದೆ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಸರ್ಕಾರಿ ಮಾರುಕಟ್ಟೆಗೆ ಮಾರಾಟ ಮಾಡಿದರೆ ತಕ್ಷಣ ಹಣ ಸಿಗುವುದಿಲ್ಲ ಎಂದು ಗ್ರಾಮಕ್ಕೆ ಬರುವಂತಹ ಖರೀದಿದಾರರಿಗೆ ಮಾರಾಟ ಮಾಡುವವರೇ ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಗ್ರಾಮದ ಯುವ ರೈತ ರಘು ಎಂಬುವವರು ಸುಮಾರು ಒಂದುವರೆ ಎಕ್ಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದು ಇಂದು ಮಾರಾಟ ಮಾಡುತ್ತಿದ್ದರು. ಇದನ್ನು ಕೊಳ್ಳಲು ಬಂದಿದ್ದಂತಹ ಕೆ.ಆರ್.ನಗರ ಮೂಲದ ಹಬೀಬ್ ಎಂಬುವವರು ಒಂದು ಚೀಲದಲ್ಲಿ ಸುಮಾರು 5 ಕೆಜಿಯಷ್ಟು ತೂಕವನ್ನು ವ್ಯತ್ಯಾಸ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇಂಥವರಿಗೆ ರೈತರು ಯಾವುದೇ ಬೆಳೆಗಳನ್ನು ಕೊಡದೆ ಸರ್ಕಾರದ ಮಾರುಕಟ್ಟೆಗೆ ಮಾರಾಟ ಮಾಡಬೇಕು. ಮುಂದಿನ ದಿನದಲ್ಲಿ ಇಂತಹ ಮೋಸ ಮಾಡುವ ಖದೀಮರಿಗೆ ಅಧಿಕಾರಿಗಳು ತಕ್ಕ ಪಾಠವನ್ನು ಕಲಿಸಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ನಂತರ ಮಾತನಾಡಿದ ರೈತ ರಘು ನಮ್ಮ ಜಮೀನಿನಲ್ಲಿ ಸುಮಾರು 28 ಕ್ವಿಂಟಲ್ ನಷ್ಟು ಮೆಕ್ಕೆಜೋಳ ಬೆಳೆದಿದ್ದು. ಮಾಂಬಹಳ್ಳಿ ಕಾಂತರಾಜ್ ಎಂಬುವವರು ಕೆ ಆರ್ ನಗರ ತಾಲೂಕಿನ ದೊಡ್ಡ ಕೊಪ್ಪಲು ಗ್ರಾಮದ ಹಬೀಬ್ ಎಂಬುವವರನ್ನು ನಮ್ಮ ಜಮೀನಿನ ಬಳಿ ಕರೆದುಕೊಂಡು ಬಂದರು ನಾವು ಅವರಿಗೆ ಮೆಕ್ಕೆಜೋಳವನ್ನು ಮಾರಾಟ ಮಾಡಿ ತೂಕ ಮಾಡುವಂತ ಸಂದರ್ಭದಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಿ ನಮಗೆ ಮೋಸ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಿ ನಮ್ಮ ಗ್ರಾಮದಲ್ಲಿ ಇದ್ದಂತಹ ಸ್ಕೇಲ್ ಒಂದನ್ನು ತರಿಸಿ ತೂಕ ಮಾಡಿಸಿದಾಗ ಸುಮಾರು ಐದು ಕೆಜಿ ವ್ಯತ್ಯಾಸ ಕಂಡು ಬಂತು. ಕೂಡಲೇ ಎಲ್ಲರೂ ಅವರನ್ನು ಪ್ರಶ್ನೆ ಮಾಡಿದಾಗ ನಿಮ್ಮ ಸ್ಕೇಲಿನ ತೂಕದಂತೆಯೇ ಪಡೆಯುತ್ತೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದುದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಇಂತಹ ಮೋಸಗಾರರಿಗೆ ಮಾರಾಟ ಮಾಡಿ ಮೋಸ ಹೋಗಬೇಡಿ ಎಂದು ರೈತರಿಗೆ ಮನವಿ ಮಾಡಿ ಅಧಿಕಾರಿಗಳು ಇಂತಹವರನ್ನು ಹಿಡಿದು ರೈತರಿಗೆ ಮೋಸವಾಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್, ಬುಂಡೆಗೌಡ, ಜಯಣ್ಣ, ಹನುಮೇಗೌಡ, ಯೋಗಣ್ಣ, ಪಟೇಲ್ ದೇವೇಗೌಡ ಸೇರಿದಂತೆ ಉಪಸ್ಥಿತರಿದ್ದರು..
ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಬಿಡುಗಡೆ..!!! ಇಲ್ಲಿದೆ ಟೂರ್ನಿ ವಿವರ..!!
ನವದೆಹಲಿ: 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಪ್ರತಿಷ್ಠಿತ ಜಾಗತಿಕ ಟೂರ್ನಿ ನಡೆಯಲಿದೆ. ಸೆಮಿಫೈನಲ್ ಪಂದ್ಯವನ್ನು ಮುಂಬೈ ಮತ್ತು ಕೋಲ್ಕತದಲ್ಲಿ ನವೆಂಬರ್ 15 ಮತ್ತು 16 ರಂದು ಆಯೋಜಿಸಲಾಗಿದೆ. ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಐಸಿಸಿ ಮತ್ತು ಅತಿಥೇಯ ಬಿಸಿಸಿಐ ಮುಂಬೈನಲ್ಲಿ ಜಂಟಿಯಾಗಿ ಆಯೋಜಿಸಿರುವ ವಿಶೇಷ ಸಮಾರಂಭದಲ್ಲಿ ಟೂರ್ನಿಯ ವೇಳಾಪಟ್ಟಿ ಅನಾವರಣಗೊಳಿಸಲಾಯಿತು. ಇತ್ತೀಚೆಗೆ ಓವಲ್ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಫೈನಲ್ ವೇಳೆ ಆತಿಥೇಯ ಬಿಸಿಸಿಐ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಐಸಿಸಿಗೆ ಸಲ್ಲಿಸಿತ್ತು. ಬಳಿಕ ವೇಳಾಪಟ್ಟಿಯ ಬಗ್ಗೆ ಪಾಕಿಸ್ತಾನ ತಗಾದೆ ತೆಗೆದಿದ್ದ ಕಾರಣ. ಅದರ ಬಿಡುಗಡೆ ವಿಳಂಬಗೊಂಡಿತ್ತು.
ಆಗಸದಲ್ಲಿ ಅನಾವರಣಗೊಂಡ ಟ್ರೋಫಿ
ವಿಶ್ವಕಪ್ ಟ್ರೋಫಿಯನ್ನು ವಿಶೇಷವಾಗಿ ಆಗಸದಿಂದ ಅನಾವರಣಗೊಳಿಸಲಾಗಿದೆ. ಭೂಮಿಯಿಂದ ಸುಮಾರು 1,20,000 ಅಡಿ ಎತ್ತರದಲ್ಲಿ ಬಲೂನ್‌ಗೆ ಕಟ್ಟಿದ ಪ್ರತಿಷ್ಠಿತ ಬೆಳ್ಳಿಯ ಟ್ರೋಫಿಯನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಕರ್ಷಕವಾಗಿ ಕೆಳಗಿಳಿಸಲಾಯಿತು. ಇದು ಗಗನಕ್ಕೇರಿದ ಮೊದಲ ಕ್ರೀಡಾ ಟ್ರೋಫಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರಿಗೆ ಮತ್ತು ನನ್ನ ಸಂಬಂಧದ ಬಗ್ಗೆ ಅಶ್ವತ್ಥ ನಾರಾಯಣ್ಗೆ ಗೊತ್ತಿಲ್ಲ..!! ಡಿಕೆಶಿ ತಿರುಗೇಟು..!!
ಬೆಂಗಳೂರು: ‘ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಅಶ್ವತ್ಥ ನಾರಾಯಣ ಅವರಿಗೆ ಗೊತ್ತಿಲ್ಲ. ಅದಕ್ಕೆ ಅವರು ಮಾತನಾಡುತ್ತಾರೆ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅವರು ತಿಳಿದುಕೊಳ್ಳಲಿ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಶ್ವತ್ಥ ನಾರಾಯಣ್ಗೆ ತಿರುಗೇಟು ನೀಡಿದರು.
‘ನಾನು 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೇರಿ ನನ್ನ ವಿದ್ಯಾಭ್ಯಾಸ ಆರಂಭಿಸಿದೆ. ತಮಿಳುನಾಡಿನ ಗಡಿ ಭಾಗ ಸಂಗಮದ ಬಳಿ ಕೆಂಪೇಗೌಡರ ಕೋಟೆ ಇದೆ. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆ ಕೋಟೆ ಸಮೀಪ ಅಕ್ಕಪಕ್ಕದಲ್ಲಿ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಮನೆ ಇದೆ. ಅಲ್ಲೇ ಹತ್ತಿರದಲ್ಲಿ ನನ್ನ ತಂದೆ ದೊಡ್ಡಹಾಲಹಳ್ಳಿ ಕೆಂಪೇಗೌಡರ ನಿವಾಸ ಇದೆ. ಇತ್ತೀಚೆಗೆ ಅದನ್ನು ಮಾರಿದ್ದೇನೆ. ಇದು ನನಗೂ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಇರುವ ಸಂಬಂಧ’ ಎಂದು ತಿಳಿಸಿದರು.
ಬದಲಾದ ವೀರ್ಯ.!!! 1.50 ಕೋಟಿ ದಂಡ ಕೊಟ್ಟ ಖಾಸಗಿ ಆಸ್ಪತ್ರೆ ....!!!
ನವದೆಹಲಿ: ಸಹಾಯಕ ಸಂತಾನೋತ್ಪತ್ತಿ ತಂತ್ರ (ಎಆರ್‌ಟಿ) ಪ್ರಕ್ರಿಯೆಯಲ್ಲಿ ವೀರ್ಯ ಅದಲು-ಬಲದು ಮಾಡಿದಕ್ಕೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ದೆಹಲಿಯ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೆ 1.50 ಕೋಟಿ ರೂಪಾಯಿ ದಂಡ ವಿಧಿಸಿದೆ.
ಮಹಿಳೆಯೊಬ್ಬರು ಜೂನ್ 2009ರಲ್ಲಿ ಎಆರ್‌ಟಿ ಪಕ್ರಿಯೆಯ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಶಿಶುಗಳ ರಕ್ತದ ಗುಂಪು ಪಾಲಕರ ಗುಂಪಿನೊಂದಿಗೆ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ, ಪಿತೃತ್ವ ಪರೀಕ್ಷೆ ಅಥವಾ ಡಿಎನ್‌ಎ ಪ್ರೊಫೈಲ್ ಪರೀಕ್ಷೆಯನ್ನು ನಡೆಸಲಾಯಿತು. ಆಗ, ಮಹಿಳೆಯ ಪತಿಯು ಈ ಅವಳಿ ಮಕ್ಕಳ ಜೈವಿಕ ತಂದೆ ಅಲ್ಲ ಎಂಬುದು ಬಹಿರಂಗವಾಯಿತು. ಈ ಹಿನ್ನೆಲೆಯಲ್ಲಿ ದಂಪತಿಯು ಸೇವೆಯಲ್ಲಿನ ನಿರ್ಲಕ್ಷ್ಯಕ್ಕಾಗಿ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಖಾಸಗಿ ಆಸ್ಪತ್ರೆ ವಿರುದ್ಧ ದೂರು ಸಲ್ಲಿಸಿದ್ದರು.
ಈ ದೂರನ್ನು ಆಲಿಸಿದ ಆಯೋಗ ಇತ್ತೀಚಿನ ವರ್ಷಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಮತ್ತು ಅನೈತಿಕ ಅಭ್ಯಾಸಗಳನ್ನು ಅನುಸರಿಸುತ್ತಿರುವ ಎಆರ್‌ಟಿ ಚಿಕಿತ್ಸಾಲಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನವಜಾತ ಶಿಶುಗಳ ಡಿಎನ್‌ಎ ವಿವರ ನೀಡುವುದನ್ನು ಕಡ್ಡಾಯಗೊಳಿಸುವುದರ ಜತೆಗೆ, ಇಂತಹ ಚಿಕಿತ್ಸಾಲಯಗಳ ಮಾನ್ಯತೆ ನೀಡುವ ಅವಶ್ಯಕತೆಯಿದೆ ಎಂದು ಹೇಳಿದೆ.
ಮಂಡ್ಯ: L/NK ಜನಾರ್ಧನ್ ಗೌಡ K.P ರವರು ಇಂದು ಹೃದಯಾಘಾತದಿಂದ ನಿಧನ
ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮವಾಸಿ ಹಾಗೂ 27 MECH INF Unit ನಲ್ಲಿ ಸೇವೆ ಸಲ್ಲಿಸುತ್ತಿದ್ದ L/NK ಜನಾರ್ಧನ್ ಗೌಡ K.P ರವರು ಇಂದು ಹೃದಯಾಘಾತದಿಂದ ಮರಣ ಹೊಂದಿರುತ್ತಾರೆ. ಅವರ ಪಾರ್ಥೀವ ಶರೀರವನ್ನು ನಾಳೆ 24 ಜೂನ್ ರಂದು ಅವರ ಸ್ವಗೃಹ ಕಿಕ್ಕೇರಿಗೆ ತರಲಾಗುತ್ತಿದೆ, ಹಾಗೂ ಅವರ ಅಂತಿಮಕ್ರಿಯೆಯನ್ನು ಕಿಕ್ಕೇರಿ ಯಲ್ಲಿ ನಡೆಸಲಾಗುವುದು.
ವಿದ್ಯುತ್ ದರ ಏರಿಕೆಗೂ..!!! ಗೃಹಜ್ಯೋತಿಗೂ ಸಂಬಂಧವಿಲ್ಲ:.. ಸಿದ್ದರಾಮಯ್ಯ..!!
ಬೆಂಗಳೂರು: ಗೃಹಜ್ಯೋತಿ ಯೋಜನೆಯ ಹೊರೆಯನ್ನು ಯಾರ ಮೇಲೂ ಹಾಕುತ್ತಿಲ್ಲ. ಇದೊಂದು ತಪ್ಪು ಅಭಿಪ್ರಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ ಅವರ ನೇತೃತ್ವದ ನಿಯೋಗವು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದನ್ನು ಮನವರಿಕೆ ಮಾಡಿಸಿದರು.
ನಮ್ಮ ಸರ್ಕಾರ ವಿದ್ಯುತ್ ಶುಲ್ಕವನ್ನು ಏರಿಸುವ ನಿರ್ಧಾರ ಮಾಡಿಲ್ಲ. ಕೆ.ಇ. ಆರ್.ಸಿಯು ಬೆಲೆ ಹೆಚ್ಚಳದ ನಿರ್ಧಾರವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಕೈಗೊಂಡಿತ್ತು ಎಂದು ವಿವರಿಸಿದರು. ನಿಯೋಗವು ಮಾಡಿರುವ ಮನವಿಯ ಕುರಿತು ಆರ್ಥಿಕ, ಇಂಧನ ಇಲಾಖೆ , ಕಾಸಿಯಾ, ಎಫ್.ಕೆ.ಸಿ.ಸಿ ಐ ಅವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೆ.ಇ.ಆರ್.ಸಿ ತನ್ನ ಸುಂಕದ ಆದೇಶದಲ್ಲಿ ಉದ್ಯಮ ವಲಯಕ್ಕೆ ವಿದ್ಯುತ್ ದರವನ್ನು ಹೆಚ್ಚಿಸಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಹೆಚ್.ಟಿ ಕೈಗಾರಿಕೆಗಳ ಮೇಲೆ ವಿಧಿಸುವ ಶೇ 9 ರಷ್ಟು ವಿದ್ಯುತ್ ತೆರಿಗೆಯನ್ನು ಶೇ 3 ರಷ್ಟು ಇಳಿಸಬೇಕು ಎಂದು ಮನವಿ ಮಾಡಿದರು. ಇಂಧನ ಶುಲ್ಕ (Fuel Escalation charges) ನಲ್ಲಿ ರಿಯಾಯಿತಿ ನೀಡಲು ಹಾಗೂ ಇತರೆ ರಾಜ್ಯಗಳಲ್ಲಿ ಎಂ.ಎಸ್.ಎಂ.ಇ ನೀತಿ ಹಾಗೂ ಕಾಯ್ದೆ ಇರುವಂತೆ ರಾಜ್ಯದಲ್ಲಿಯೂ ಕಾಯ್ದೆ ರಚನೆ ಮಾಡುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಎಫ್.ಕೆ.ಸಿ.ಸಿ.ಐ ಪದಾಧಿಕಾರಿಗಳಾದ ರಮೇಶ್ ಚಂದ್ರ ಲಾಹೋಟಿ, ಎಂ.ಜಿ.ಬಾಲಕೃಷ್ಣ , ಡಾ: ಪ್ರಸಾದ್, ಬಿ.ಟಿ. ಮನೋಹರ್ ಉಪಸ್ಥಿತರಿದ್ದರು
ಜುಲೈ 4ರೊಳಗೆ 5 ಗ್ಯಾರಂಟಿ ಕೊಡಿ ..!! ಅಥವಾ ಅಧಿಕಾರ ಬಿಡಿ : ಮಾಜಿ ಸಿಎಂ ಬಿಎಸ್ವೈ..!!
ದಾವಣೆಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಜುಲೈ 4ರೊಳಗೆ ಈಡೇರಿಸಬೇಕು ಇಲ್ಲವಾದಲ್ಲಿ ಜುಲೈ 5ರಿಂದ ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಚ್ಚರಿಸಿದ್ಧಾರೆ.
ದಾವಣಗೆರೆಯಲ್ಲಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಿಎಸ್ವೈ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಹಿ ಮಾಡಿದ ಕಾರ್ಡ್ಗಳನ್ನು ಮನೆ ಮನೆಗೆ ವಿತರಿಸಿದ್ದರು. ಇದನ್ನು ನಂಬಿ ಜನ ನಿಮಗೆ ಮತ ಹಾಕಿದ್ದಾರೆ. ನಿರೀಕ್ಷೆ ಮಾಡದಷ್ಟು ಮಟ್ಟಿಗೆ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಉಪವಾಸ ಹೋರಾಟ
ಹಲವು ಷರತ್ತುಗಳನ್ನು ವಿಧಿಸಿ ಶಕ್ತಿ ಯೋಜನೆ ಜಾರಿಗೆ ತಂದು ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದೀರಾ. ಅದು ಬಿಟ್ಟರೆ ಒಂದೂವರೆ ತಿಂಗಳಿನಿಂದ ಉಳಿದ ಗ್ಯಾರಂಟಿಗಳನ್ನು ಜಾರಿ ಮಾಡಿಲ್ಲ. ಜುಲೈ 3ರಂದು ಬಜೆಟ್ ಪೂರ್ವಭಾವಿ ಅಧಿವೇಶನ ನಡೆಯಲಿದ್ದು, ಅಷ್ಟರಲ್ಲಿ ಉಳಿದ ಗ್ಯಾರಂಟಿಗಳನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಜುಲೈ 5ರಿಂದ ಗಾಂಧಿ ಪ್ರತಿಮೆ ಎದುರು ಉಪವಾಸ ಹೋರಾಟ ಮಾಡುತ್ತೇನೆ.
ಚುನಾವಣೆಯಲ್ಲಿ ಹಿನ್ನಡೆ ಕಂಡ ಅಭ್ಯರ್ಥಿಗಳು ನನ್ನ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ಧಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ನಮ್ಮ ಪಕ್ಷದ ಶಾಸಕರು ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್ನವರ ಕಿವಿ ಹಿಂಡಲಿದ್ಧಾರೆ. ಭರವಸೆ ಈಡೇರಿಸುವವರೆಗೂ ಧರಣಿಯನ್ನು ಕೈ ಬಿಡುವ ಮಾತಿಲ್ಲ ಎಂದು ಹೇಳಿದ್ಧಾರೆ.
ಜನರನ್ನು ಮರಳು ಮಾಡಲು ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ನಾಟಕವಾಡುತ್ತಿದೆ. ಚುನಾವಣೆಯಲ್ಲಿ ಗೆಲ್ಲಲೆಂದು ಭರವಸೆ ನೀಡಿದ್ಧಾರೆಯೇ ಹೊರತು ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಒಂದು ಮಾತು ಕೇಳಿಲ್ಲ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದ್ದು, ಕಾಂಗ್ರೆಸ್ನವರು ಹೇಳಿದಂತೆ 10 ಕೆಜಿ ಸೇರಿಸಿ ಜನತೆಗೆ ಒಟ್ಟು 15 ಕೆಜಿ ಅಕ್ಕಿ ಕೊಡಲಿ. ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ಧಾರೆ.
ಕಣ್ಣು ಗುಡ್ಡೆ ಕಿತ್ತು ಬಂದರೂ..!! ಕರಡಿ ಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡ ವೃದ್ಧ... !!!
ಉತ್ತರಕನ್ನಡ: 72 ವರ್ಷದ ವ್ಯಕ್ತಿಯೊಬ್ಬರು ಕರಡಿ ದಾಳಿಯಿಂದ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯ್ಡಾ ತಾಲ್ಲೂಕಿನ ಜಗಲ್ಪೇಟ್ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ ನಡೆದಿದೆ.
ಘಟನೆಯೂ ಮಧ್ಯಾಹ್ನ 3:30ರ ಸುಮಾರಿಗೆ ಸಂಭವಿಸಿದ್ದು, ಕರಡಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ವಿಠ್ಠಲ್ ಸಲಾಕೆ(720 ಎಂದು ಗುರುತಿಸಲಾಗಿದ್ದು, ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಘಟನೆ ಸಂಭವಿಸಿದೆ.
ಹೋರಾಡಿ ಜೀವ ಉಳಿಸಿಕೊಂಡ ವ್ಯಕ್ತಿ
ಮಾಲೋರ್ಗಿ ಗ್ರಾಮದ ನಿವಾಸಿಯಾದ ವಿಠ್ಠಲ್ ಕರಡಿಯೊಂದಿಗೆ ಸುಮಾರು 20 ನಿಮಿಷಗಳ ಕಾಲ ಕಾದಾಡಿ ಜೀವವನ್ನು ಉಳಿಸಿಕೊಂಡಿದ್ಧಾರೆ. ದಾಳಿ ವೇಳೆ ಕರಡಿಯೂ ಅವರ ಒಂದು ಕಣ್ಣನ್ನು ಕಿತ್ತು ಹಾಕಿದ್ದು, ಮತ್ತೊಂದು ಕಣ್ಣನ್ನು ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯ ವೇಳೆ ಗಾಯಾಳು ಜೋರಾಗಿ ಕೂಗಾಡಿದ್ದರ ಪರಿಣಾಮ ಕರಡಿ ಗಾಬರಿಯಿಂದ ಕಾಡಿನೊಳಗೆ ಓಡಿ ಹೋಗಿದೆ.
ಕರಡಿ ದಾಳಿಯಿಂದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವೃದ್ದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದ್ದ ತಮ್ಮ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗಿದ್ಧಾರೆ. ರಕ್ತ ಮಡುವಿನಲ್ಲಿದ್ದ ಅವರನ್ನು ಕೂಡಲೇ ರಾಮನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಅವರನ್ನು ಬೆಳಗಾವಿಗೆ ಶಿಫ್ಟ್ ಮಾಡಿದ್ಧಾರೆ.
ಗಾಯಗೊಂಡಿರುವ ವಿಠ್ಠಲ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿರುವ ಕಾರಣ ಮುಂದಿನ ಎರಡ್ಮೂರು ದಿನಗಳಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ಧಾರೆ.
10, 20 ಸಾವಿರ ಅಲ್ಲವೇ ಅಲ್ಲ.. ತಗಡಿನ ಶೆಡ್ನಲ್ಲಿರುವ ಅಜ್ಜಿಗೆ ಬಂತು 1 ಲಕ್ಷ ರೂ. ಕರೆಂಟ್ ಬಿಲ್..!
ಕೊಪ್ಪಳ: ರಾಜ್ಯ ಸರ್ಕಾರ 200 ಯೂನಿಟ್ ವರೆಗೆ ವಿದ್ಯುತ್ ಬಿಲ್ ಉಚಿತ ಎಂದು ಘೋಷಣೆ ಮಾಡಿದೆ. ಅಂತೆಯೇ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ವಿದ್ಯುತ್ ಸಂಸ್ಥೆಗಳು ಗ್ರಾಹಕರಿಗೆ ಶಾಕ್ ನೀಡೋದನ್ನು ಮುಂದುವರಿಸಿವೆ.
ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ರಾಜ್ಯದ ಹಲವು ಭಾಗಗಳಲ್ಲಿರುವ ಮನೆಗಳ ಬಿಲ್ನಲ್ಲಿ ಈ ಹಿಂದೆ ಕಟ್ಟುತ್ತಿದ್ದ ಹಣಕ್ಕಿಂತ ಹೆಚ್ಚು ತೋರಿಸುತ್ತಿದೆ ಎಂಬ ಆರೋಪ ಕೇಳಿಬರ್ತಿದೆ. ಅದರ ಮುಂದುವರಿದ ಭಾಗವಾಗಿ 90 ವರ್ಷದ ವೃದ್ಧೆಯೊಬ್ಬರ ಮನೆಯ ಕರೆಂಟ್ ಬಿಲ್ ಬರೋಬ್ಬರಿ 1,03,315 ರೂಪಾಯಿ ಬಂದಿದೆ.
ಕೊಪ್ಪಳದ ಭಾಗ್ಯನಗರದ ನಿವಾಸಿ ಗೀರಿಜಮ್ಮ ಎಂಬ ವೃದ್ಧೆಯ ಕರೆಂಟ್ ಬಿಲ್ ಒಂದು ಲಕ್ಷಕ್ಕೂ ಅಧಿಕ ಬಂದಿದೆ. ಅಂದಹಾಗೆ ಇವರ ನಿವಾಸದಲ್ಲಿ ಇರೋದು ಕೇವಲ 2 ಬಲ್ಬುಗಳು. ಹೀಗಿರುವಾಗ ಇಷ್ಟೊಂದು ಬಿಲ್ ಬರಲು ಹೇಗೆ ಸಾಧ್ಯ ಎಂದು ಕಣ್ಣೀರಿಟ್ಟಿದ್ದಾರೆ.
ಈ ಹಿಂದೆ 70 ರಿಂದ 80 ರೂಪಾಯಿವರೆಗೆ ಬಿಲ್ ಬರ್ತಿತ್ತು. ಹೊಸ ಮೀಟರ್ ಅಳವಡಿಸಿದ ಬೆನ್ನಲ್ಲೇ 6 ತಿಂಗಳಲ್ಲಿ 1 ಲಕ್ಷ ರೂಪಾಯಿ ಬಿಲ್ ದಾಟಿದೆ. ಸಣ್ಣ ತಗಡಿನ ಶೆಡ್ನಲ್ಲಿ ವಾಸಿಸುವ ಈ ವೃದ್ಧೆಗೆ 90 ವರ್ಷ ಆಗಿದೆ. ಕೇವಲ ಎರಡು ಬಲ್ಬ್ಗಳನ್ನು ಉರಿಸಿದ್ರೆ ಇಷ್ಟೊಂದು ಬಿಲ್ ಬರುತ್ತಾ ಅನ್ನೋ ಪ್ರಶ್ನೆ ಶುರುವಾಗಿದೆ.